ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಶೀನಪ್ಪ ರೈಗಳ ಆರು ದಶಕಗಳ ಯಕ್ಷ ತಿರುಗಾಟದ ಸಾರ್ಥಕ್ಯ

ಲೇಖಕರು :
ಎಂ. ದೇವಾನಂದ ಭಟ್‌, ಬೆಳುವಾಯಿ
ಗುರುವಾರ, ಏಪ್ರಿಲ್ 14 , 2016

ತನ್ನ 13ನೇ ವಯಸ್ಸಿನಲ್ಲಿ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿ ಕಳೆದ ಆರು ದಶಕಗಳಿಂದ ಯಕ್ಷ ಸಾಮ್ರಾಜ್ಯ ವನ್ನಾಳುತ್ತಿರುವ ಸಂಪಾಜೆ ಶೀನಪ್ಪರೈಗಳು ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದವರು. ಈ ವರ್ಷ ಯಕ್ಷ ತಿರುಗಾಟದ 60ರ ಸಂಭ್ರಮವನ್ನು ಸದ್ದುಗದ್ದಲವಿಲ್ಲದೆ ಆಚರಿಸಿಕೊಳ್ಳುತ್ತಿರುವ ರೈಗಳು ಕಲೆಯೊಂದಿಗೆ ಬದುಕನ್ನು ಕಟ್ಟಿ ಕಲಾ ಸಮೃದ್ಧಿಯಿಂದ ರಸಿಕ ಜನಪ್ರೀತಿಯನ್ನು ಪಡೆದವರು. ಈ ಕಲಾಸಾಧನೆಯ ಸಂತೃಪ್ತಿ - ಸಂಭ್ರಮವನ್ನು ದೇವಿಯ ಸೇವಾರೂಪವಾದ ಯಕ್ಷಗಾನ ಬಯಲಾಟ ಏರ್ಪಡಿಸುವ ಮೂಲಕ ತನ್ನ ಸುತ್ತಲಿನ ಕಲಾಭಿಮಾನಿಗಳ ಜತೆಗೆ ಆಚರಿಸಲು ನಿರ್ಧರಿಸಿದ್ದಾರೆ.

ನೋವು ನಲಿವುಗಳ ಮಧ್ಯೆ ಮೇಳದ ತಿರುಗಾಟವನ್ನು ಮುಂದುವರಿಸಿದ ಆನೇಕ ಹಿರಿಯ ಕಲಾವಿದರಲ್ಲಿ ರೈಗಳು ಕೂಡ ಒಬ್ಬರು. ಗಾಡಿ ಮೇಳದಲ್ಲಿ ತಲೆಯ ಮೇಲೆ ಪೆಟ್ಟಿಗೆ ಹೊತ್ತು ಈ ಕಲೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಾಯಕದಲ್ಲಿ ಧೃತಿಗೆಡದೆ ಅಲ್ಪ ಸಂಪಾದನೆಯಲ್ಲೂ ಸಂತೃಪ್ತಿಯ ಹಾಲುಂಡವರು ರೈಗಳು. ಪ್ರಕಾಂಡ ಪಂಡಿತರಲ್ಲದಿದ್ದರೂ ತನ್ನ ಬಹುಕಾಲದ ತಿರುಗಾಟದ ಅನುಭವದ ನೆಲೆಯಲ್ಲಿ ಪೌರಾಣಿಕ ಪ್ರಸಂಗಗಳ ಎಲ್ಲ ಪಾತ್ರಗಳು ಮತ್ತು ಪ್ರಸಂಗದ ರಂಗನಡೆಯನ್ನು ಚಾಚೂ ತಪ್ಪದಂತೆ ತಿಳಿದವರು. ವೇಷ ಧರಿಸಿ ರಂಗ ಪ್ರವೇಶಿಸಿದ ಬಳಿಕ ಕಥೆ ಸಾಗಿದಂತೆ ಏರುತ್ತಲೇ ಹೋಗುವುದು ರೈಗಳ ಪಾತ್ರಗಳ ಮುಖ್ಯ ಗುಣ. ತನ್ನ ಸ್ವಂತಿಕೆಯಿಂದ ಪಾತ್ರ ಗಳನ್ನು ರಸಮಯವಾಗಿ ಅಭಿವ್ಯಕ್ತಪಡಿಸಿ ಪ್ರೇಕ್ಷಕರನ್ನು ಕಲಾ ವರ್ತುಲ ದಲ್ಲಿ ಹಿಡಿದಿಡುವ ಅದ್ಭುತ ಸಾಮರ್ಥ್ಯವಂತ ಅವರು.

ಕಲಾವಲಯದಲ್ಲಿ ಜ್ಞಾನ ಸಂಪಾದನೆಯೆಂದರೆ ಪ್ರವಾಹದ ವಿರುದ್ಧ ನೌಕೆಯನ್ನು ಸಾಗಿಸಿಕೊಂಡು ಹೋದಂತೆ. ಕಲಾವಿದ ಪ್ರತಿಕೂಲಗಳನ್ನೆದುರಿಸಿ ತನ್ನ ಅನುಭವ, ವಿಚಾರ ವಿನಿಮಯ, ಪೂರ್ವತಯಾರಿಗಳ ಮೂಲಕ ಪಾತ್ರಗಳ ಗುಣ ಸ್ವಭಾವ, ಹಿನ್ನೆಲೆ ಮುನ್ನೆಲೆಗಳನ್ನು ಮಥಿಸಿ ಅನುದಿನವೂ ಭಿನ್ನ ಬಗೆಯಲ್ಲಿ ಪಾತ್ರಗಳನ್ನು ಪ್ರಸ್ತುತಪಡಿಸಬೇಕಾಗುತ್ತದೆ. ಆಗ ಮಾತ್ರ ಸಮರ್ಥ ಕಲಾವಿದನಾಗುತ್ತಾನೆ, ಗುರುತಿಸಲ್ಪಟ್ಟು ಮಾನ ಸಮ್ಮಾನಗಳಿಗೆ ಭಾಜನನಾಗುತ್ತಾನೆ. ಅನುಭವದ ಪಕ್ವತೆಯಿಂದ ಗಂಭೀರ ವ್ಯಕ್ತಿತ್ವವನ್ನು ಹೊಂದುತ್ತಾನೆ. ಆ ನೆಲೆಯಲ್ಲಿ ಶೀನಪ್ಪ ರೈಗಳು ಮಾಗಿದ ಫ‌ಲ. ಅವರ ತಿಳಿವಿನ ವರ್ತುಲಕ್ಕೆ ಯಕ್ಷಗಾನವೇ ಕೇಂದ್ರ ಬಿಂದು, ಕಿರಿಯ ಕಲಾವಿದರಿಗೆ ಆದರ್ಶರಾಗಿ ಅನುಸರಣೀಯರಾಗಿ ಬಾಳುತ್ತಿರುವ ಕಲಾಯೋಗಿ ಅವರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಗೌರವ -ಪ್ರಶಸ್ತಿಗಳಿಗೆ ಭಾಜನರಾದ ಸಂಪಾಜೆ ಶೀನಪ್ಪ ರೈಗಳಿಗೆ ಈ ವರ್ಷ ತಿರುಗಾಟದ 60ರ ಸಂಭ್ರಮ. ಅವರದೇ ಮನೆಯಂಗಳದಲ್ಲಿ ಯಾವುದೇ ಸಭಾ ಸಮಾರಂಭ, ಗದ್ದಲದ ಕಾರ್ಯಕ್ರಮಗಳಿಲ್ಲದೆ ಭಕ್ತಿಪೂರ್ವಕವಾದ ಸೇವಾ ಕಾರ್ಯಕ್ರಮವಾಗಿ ಇದು ಮೂಡಿಬರಲಿದೆ. ಕಲಾಮಾತೆಯ ವರಪುತ್ರನಾಗಿ ಬದುಕು ಸವೆಸುತ್ತಿರುವ 74ರ ಹರೆಯದ ಈ ಶುದ್ಧ ಸಾತ್ವಿಕ ಗುಣವಂತ ಹಿರಿಯ ಕಲಾವಿದ ಇನ್ನಷ್ಟು ಕಾಲ ಆರೋಗ್ಯಪೂರ್ಣ ಕಲಾಸೇವೆಯಲ್ಲಿ ತೊಡಗಿರಲಿ.



****************


ಕೃಪೆ : udayavani




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ